ಹುಬ್ಬಳ್ಳಿ: ಕಿಮ್ಸ್ ಅನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಪರಿಗಣಿಸಿರುವುದರಿಂದ ಅಲ್ಲಿ ಕೋವಿಡ್ ಅಲ್ಲದ ( ನಾನ್ ಕೋವಿಡ್) ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕದ ಹಿನ್ನೆಲೆಯಲ್ಲಿ ಪೂರ್ವ ಕ್ಷೇತ್ರದಲ್ಲಿನ 2 ಹೊಸ ಆಸ್ಪತ್ರೆಗಳನ್ನು ಸಾಮಾನ್ಯ ರೋಗ ತಪಾಸಣೆ ಆಸ್ಪತ್ರೆಯನ್ನಾಗಿ ಬಳಕೆ ಮಾಡಿಕೊಳ್ಳುವಂತೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳೊಂದಿಗಿನ
ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿಂದು ಭಾಗವಹಿಸಿ ಮಾತನಾಡಿದ ಶಾಸಕರು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರಲ್ಲಿ ಮನವಿ ಮಾಡಿದರು.
ಕಿಮ್ಸ್ ನಲ್ಲಿ ಸಾಮಾನ್ಯ ರೋಗ ತಪಾಸಣೆ ನಡೆಯದ್ದರಿಂದ ನಾನ್ ಕೋವಿಡ್ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಕ್ಷೇತ್ರ ವ್ಯಾಪ್ತಿಯ ಎಸ್.ಎಂ.ಕೃಷ್ಣಾ ನಗರ ಹಾಗೂ ಸೋನಿಯಾ ಗಾಂಧಿ ನಗರದಲ್ಲಿ ತಲಾ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಶೀಘ್ರವೇ ಉದ್ಘಾಟನೆಗೊಳಿಸಿ ಸಾಮಾನ್ಯ ಆರೋಗ್ಯ ತಪಾಸಣಾ ಕೇಂದ್ರವನ್ನಾಗಿ ಬಳಸಿಕೊಳ್ಳಬೇಕು ಎಂದು ಕೋರಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಈ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೀಶ ಪಾಟೀಲ, ಪೊಲೀಸ್ ಆಯುಕ್ತ ಲಾಬೂರಾಂ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾಮಾನ್ಯ ರೋಗ ತಪಾಸಣೆಗೆ ಪೂರ್ವ ಕ್ಷೇತ್ರದಲ್ಲಿ 2 ಹೊಸ ಆಸ್ಪತ್ರೆಗಳ ಬಳಕೆಗೆ ಶಾಸಕ ಪ್ರಸಾದ ಅಬ್ಬಯ್ಯ ಮನವಿ
Spread the love